ಪ್ರಧಾನಿ ದಕ್ಷಿಣ ಆಫ್ರಿಕಾ, ಗ್ರೀಸ್ ಗೆ 4 ದಿನಗಳ ಪ್ರವಾಸ

Описание к видео ಪ್ರಧಾನಿ ದಕ್ಷಿಣ ಆಫ್ರಿಕಾ, ಗ್ರೀಸ್ ಗೆ 4 ದಿನಗಳ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ ದೇಶಗಳಿಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ ಪ್ರಧಾನಿ, ದೆಹಲಿಯಿಂದ ಪ್ರಯಾಣ ಬೆಳೆಸಿದರು.
ಈ ಕುರಿತು ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ನಿನ್ನೆ ಮಾಹಿತಿ ನೀಡಿ, 22 ರಿಂದ 24ರ ವರೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌‌ನ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಮಟಮೆಲಾ ಸಿರಿಲ್ ರಮಾಫೋಸಾ ಅವರ ಆಹ್ವಾನದ ಮೇರೆಗೆ 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೋವಿಡ್‌ ಕಾರಣದಿಂದ ಕಳೆದ ಮೂರು ವರ್ಷಗಳಲ್ಲಿ ವರ್ಚುವಲ್‌ ಮೂಲಕ ಸಭೆ ನಡೆಯುತ್ತಿತ್ತು. ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿಯವರು ಖುದ್ದು ಭೇಟಿ ನೀಡುತ್ತಿದ್ದಾರೆ .ಈ ಸಂದರ್ಭದಲ್ಲಿ ಬ್ರಿಕ್ಸ್ - ಆಫ್ರಿಕಾ ಔಟ್ ರೀಚ್ ಮತ್ತು ಬ್ರಿಕ್ಸ್ ಪ್ಲಸ್ ಸಂವಾದದಲ್ಲಿ ಪ್ರಧಾನಿ ಭಾಗವಹಿಸಲಿದ್ದು, ದಕ್ಷಿಣ ಆಫ್ರಿಕಾ ಭೇಟಿ ಸಂದರ್ಭದಲ್ಲಿ ಪ್ರಮುಖ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ವಿವಿಧ ದೇಶಗಳ ಬ್ರಿಕ್ಸ್‌ ಮುಖಂಡರ ಜೊತೆ ಜಾಗತಿಕ ಅಭಿವೃದ್ಧಿ ಹಾಗೂ ಸವಾಲುಗಳು, ಆಂತರಿಕ ಭದ್ರತೆ, ಆರ್ಥಿಕತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ದಕ್ಷಿಣ ಆಫ್ರಿಕಾ ಭೇಟಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ, 25ರಿಂದ ಗ್ರೀಸ್‌ಗೆ ಭೇಟಿ ನೀಡಲಿದ್ದಾರೆ. ಸುಮಾರು 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು ಎಂದು ಅವರು ಹೇಳಿದರು.
ಉಭಯ ದೇಶಗಳು ಇತ್ತೀಚಿನ ವರ್ಷಗಳಲ್ಲಿ ಕಡಲ ಸಾರಿಗೆ, ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆಗಳು ಹಾಗೂ ಜನರ ನಡುವಿನ ಸಂಬಂಧಗಳಂತಹ ಕ್ಷೇತ್ರಗಳಲ್ಲಿ ಸಹಕಾರದ ಮೂಲಕ ಬಲಗೊಂಡಿವೆ. ಈ ಕುರಿತು ಮುಖಂಡರ ಜೊತೆ ಪ್ರಧಾನಿ ಚರ್ಚಿಸಲಿದ್ದಾರೆ ಎಂದು ವಿನಯ್‌ ಕ್ವಾತ್ರಾ ಹೇಳಿದರು.

Комментарии

Информация по комментариям в разработке