Draupadi Maana Rakshana- Udaya Raga Kruthi

Описание к видео Draupadi Maana Rakshana- Udaya Raga Kruthi

ದ್ರೌಪದೀ ಮಾನ ರಕ್ಷಣಾ- ಉದಯ ರಾಗ ಕೃತಿ
ಶ್ರೀ ಪುರಂದರ ದಾಸ ವಿರಚಿತ 🙏
ವಾಸುದೇವಾಯ ನಮೋ ವಾಸುದೇವಾಯ ನಮೋ
ವಾಸುಕೀ ಶಯನ ಸುರನಮಿತ ಚರಣಾಂಭೋಜ
ಭಕ್ತ ಪೋಷಕನೆ ರಕ್ಷಿಪುದು ಕೇಶವ ಅನಾಥ ಬಂಧು||೧||
ಸೊಂಡಿಲಾ ಪುರದೊಳಗೆ ದುರುಳ ದುರ್ಯೋಧನನು
ಪಾಂಡು ನಂದನರೊಡನೆ ಕಪಟ ಜೂಜುಗಳಾಡಿ
ಗಂಡರೈವರ ಮುಂದೆ ನೃಪರ ಸತಿಯಳ ಸೆರಗ
ಲಂಡ ದುಶ್ವಾಸ ಪಿಡಿಯೇ||೨||
ಕಂಡು ಮನದಲಿ ಬೆದರಿ ಪರಮಾತ್ಮ ಪರಿಪೂರ್ಣ
ಪುಂಡರೀಕಾಕ್ಷ ರಕ್ಷಿಪುದೆನುತಾ
ಮೊರೆಯಿಟ್ಟಳಂಡಜಾ ತುರುಗಗಾಗ ||೩||
ಪತಿಗಳೈವರು ಸತ್ಯ ವ್ರತದಿ ಸುಮ್ಮನೆ ಇಹರು
ಅತಿ ಕ್ಲೇಷ ಪಡುತಿಹರು ವಿದುರ ಭೀಷ್ಮಾದಿಗಳು
ಸುತನ ಮೇಲಿನ ಮೋಹ ಮಮತೆಯಲಿ ಸುಮ್ಮನಿಹ
ಗತ ಲೋಚನದ ಮಾವನು||೪||
ಕೃತಕಪಟದಲ್ಲಿಹರು ಶಕುನಿ ಕರ್ಣಾದಿಗಳು
ಹಿತವ ಬಯಸುವರ ಕಾಣೆ ನಾನಿದರೊಳಗೆ
ಗತಿಯಿಲ್ಲದಿದ್ದೋರ್ಗೆ ಗತಿ ನೀನೆ ಯದುಕುಲಕೆ
ರತಿಪತಿ ಪಿತನೆ ಸಲಹೋ||೫||
ಪಾವುಕನ ಉರಿಯೊಳಗೆ ಹೊಕ್ಕು ಹೊರಡಲಿಬಹುದು
ಹಾವುಗಳ ಹೆಡೆ ಹಿಡಿದು ಎಳೆದೆಳೆದು ತರಬಹುದು
ತೀವಿರ್ದ ಮಡುವಿನೊಳು ಧುಮುಕಲುಬಹುದು
ಗರಳವ ಸೇವಿಸಲಿಬಹುದು||೬||
ಸಾವಿಗಂಜದೆ ಕೊರಳ ಕತ್ತರಿಸಲೀಬಹುದು
ಜೀವ ಇದ್ದಂತೆ ಲಜ್ಜೆಯ ತೊರೆಯಲಾರೆನೈ
ಆವ ಪರಿಯಲಿ ನಿನ್ನ ನಂಬಿದ್ದನಾಥಳನು
ದೇವಾಭಿಮಾನವನು ಕಾಯೋ||೭||
ಅತ್ತೆಯಲ್ಲವೆ ಎನಗೆ ಗಾಂಧಾರಿ ದೇವಿಯರು
ಮೃತ್ಯುವಂತಿವನೆಳೆವ ಬಿಡಿಸ ಬಾರದೆ ತಾಯೇ
ಉತ್ತುಮಳು ನೀ ನೆಗೆಣ್ಣೆ ಭಾನುಮತೀ
ಇತ್ತ ದಯಮಾಡಿ ನೋಡೇ||೮||
ಸುತ್ತ ನೆರೆದಿಹ ಸಭೆಯ ಪರಿವಾರದವರೆಲ್ಲ
ಪೆತ್ತುದಿಲ್ಲವೆ ಎನ್ನ ಪೋಲ್ವ ಹೆಣ್ಮಕ್ಕಳನು
ಹುತ್ತದಲಿ ಹುದುಗಿದ್ದ ಸರ್ಪ ಸಾಯಲು ಬಹುದೇ
ತತ್ವ ಬಾಹಿರರಾದಿರಾ||೯||
ಆರಿಗ್ವೊರಲಿದರೆನ್ನ ದೂರು ಕೇಳುವರಿಲ್ಲ
ಸಾರಿದರೆ ಪೊರೆವ ಕಂಸಾರಿ ನೀನಲ್ಲ
ನನಗಾರು ಆಪ್ತ ಬಂಧು||೧೦||
ಮಾರಿದರು ಧರ್ಮ ದೇವತರಗೆನ್ನ ವಲ್ಲಭರು
ಭಾರ ನಿನ್ನದು ಎಂದು ನಂಬಿದ್ದನಾಥಳನು
ನೀರಿನೊಳಗದ್ದು ಕ್ಷೀರದೊಳಗದ್ದು ನೀನೇ ಗತಿ
ನಾರಾಯಣನೆ ರಕ್ಚಿಸೋ||೧೧||
ಅಸುರ ಬೆನ್ನಟ್ಟಿ ಬರೆ ಪಶುಪತಿಯ ರಕ್ಷಿಸಿದೆ
ಋಷಿ ಶಾಪವನು ಧರಿಸಿದ್ದಂಬರೀಷನ ಕಾಯ್ದೆ
ವಸುಧೆಯಲಿ ಕಲ್ಲಾಗಿ ಬಿದ್ದಹಲ್ಯೆಯ ಪೊರೆದೆ
ಶಿಷುವು ಪ್ರಹ್ಲಾದಗೊಲಿದೆ||೧೨||
ಹಸುಳೆ ಧ್ರುವರಾಯಂಗೆ ಹೆಸರುಳ್ಳ ಪದವಿತ್ತೆ
ದಶಕಂಠನನುಜಂಗೆ ಸ್ಥಿರ ಪಟ್ಟವನು ಕೊಟ್ಟೆ
ಹೆಸರುಗೊಂಡರೆ ಸುತನ ಅಜಮಿಳನ ಕಾಯ್ದೇ
ವಸುದೇವ ಸುತನೆ ಸಲಹೋ||೧೩||
ಲಕ್ಷ್ಮೀ ಮನೋಹರನೆ ಇಕ್ಷು ಛಾಪನ ಪಿತನೆ
ಯಕ್ಷ ಗಂಧರ್ವ ಮುನಿ ಅಮರೇಂದ್ರ ವಂದಿತನೆ
ಅಕ್ಷಯನೆ ಆಟದಲಿ ಜಗವ ಮೋಹಿಪನೆ
ಸೂಕ್ಷ್ಮದೊಳು ಪರಿಪೂರ್ಣನೆ||೧೪||
ಅಕ್ಷಯ ಅಸುರಾಂತಕಗೆ ಅಜ ಪದವಿಯನಿತ್ಯೋ
ದಕ್ಷ ಸುತೆ ಪತಿ ಸಖನೆ ಪಕ್ಷಿವಾಹನ ದೇವ
ರಕ್ಷಿಸೋ ಅನಾಥ ಬಂಧು||೧೫||
ತಂದೆ ತಾಯಿಯು ನೀನೆ ಬಂಧು ಬಳಗವು ನೀನೇ
ಇಂದೆನ್ನ ಕುಲಸ್ವಾಮಿ ಗುರು ಪಿತಾಮಹ ನೀನೇ
ಎಂದು ನಂಬಿದೆ ಎನ್ನ ಮಾನ ಅಭಿಮಾನ
ಮುಕುಂದ ನಿನಗೊಪ್ಪಿಸಿದೆನೈ||೧೬||
ಕೊಂದರೊಳ್ಳಿತು ಎನ್ನ ಕಾಯ್ದರೊಳ್ಳಿತು ಎಂದು
ಕಣ್ಗಳನೆ ಮುಚ್ಚಿ ಕರಗಳ ನೆಗಹೀ
ಗೋವಿಂದಾ! ಎಂದಳು ಮೃಗಾಕ್ಷೀ||೧೭||
ಇಂತೆನುತ ದ್ರೌಪದಿಯು ಮೊರೆಯಿಡುವುದನು ಕೇಳಿ
ಅಂತರಾತ್ಮಕ ಕೃಷ್ಣ ದ್ವಾರಕಾ ಪುರದೊಳಗೆ
ಕಾಂತೆ ರುಕ್ಮಿಣೀ ಸತ್ಯಭಾಮೆಯರ ಒಡನೆ
ಏಕಾಂತ ಭವನದಲಿ ಕುಳಿತು||೧೮||
ಕುಂತಿ ನಂದನರ ಸತಿ ಉಟ್ಟುದಕ್ಷಯವಾಗಿ
ಸಂತೋಷಗೊಳಲೆಂದು ವರವಿತ್ತ ಶ್ರೀ ಕೃಷ್ಣ
ಎಂತುಂಟು ಹರಿಕೃಪೆಯು ತನ್ನ ಭಕ್ತರ ಮೇಲೆ
ಅನಂತ ವಸ್ತ್ರಗಳಾದವೈ||೧೯||
ಸೆಳೆಯುತಿದ್ದನು ಖಳನು ಬೆಳೆಯುತಿದ್ದವು ಸೀರೆ
ಚೆಲುವ ಪೊಂಬಟ್ಟೆ ನಾನಾ ವಿಚಿತ್ರದಾ ಬಣ್ಣ
ಹೊನಲು ತುಂಬಿದ ಸೀರೆ ಎಳೆದೆಳೆದು ಪಾಪಾತ್ಮ
ಬಳಲಿ ಬಿದ್ದನು ಭುವಿಯೊಳು||೨೦||
ಕಳೆಯುಗುಂದಿತು ಮೋರೆ ಶಕುನಿ ದುರ್ಯೋಧನರು
ಬಳಿಯೆ ನಿಂತಿದ್ದ ಭಟರನೆ ಕರೆದು ನೇಮಿಸುತ
ತಿಳುಹುದಲೆ ಬೊಕ್ಕಸಕೆ ಕಳುಹು ವಸ್ತ್ರಗಳ ಎನಲು
ನಳಿನಮುಖಿ ತಿಳಿದಳದನು||೨೧||
ಸಿಟ್ಟಿನಲಿ ಪತಿವ್ರತೆಯು ಕಣ್ತೆರೆದು ನೋಡಿದಳು
ಬೆಟ್ಟದಂತೊಟ್ಟಿದ್ದ ವಸ್ತ್ರ ರಾಶಿಗಳೆಲ್ಲ
ಸುಟ್ಟಗ್ನಿ ಹೊರಸೂಸಿ ರಾಜಮನೆ ಕೆಲವು
ಪಟ್ಟಣಾಹುತಿಗೊಂಡವೈ||೨೨||
ಕೊಟ್ಟಳೇ ಕಮಲಮುಖಿ ಕುರುಪತಿಗೆ ಶಾಪವನು
ಕೊಟ್ಟಳಾ ರಣದಿ ಭೀಮಸೇನನ ಗದೆ ಬಂದು
ಕುಟ್ಟಿ ಕೆಡಹಲಿ ನಿನ್ನ ತೊಡೆಗಳೆರಡನು ಎಂದು
ಇಟ್ಟ ನುಡಿ ತಪ್ಪಲುಂಟೇ||೨೩||
ಮೂಡಿದವು ಪ್ರತಿ ಸೂರ್ಯ ಧೂಮಕೇತುಗಳು
ಓಡಾಡಿದವು ಗಗನದಲಿ ಹದ್ದು ಕಾಗಿಗಳು
ಕಾದಾಡಿದವು ಮೃಗಜಾತಿ ಚಲಿಸಿದವು ಪ್ರತಿಮೆ
ರೂಢಿ ಗಡಗಡ ನಡುಗಿತು||೨೪||
ಮೂಡಿದವು ನಕ್ಷತ್ರ ರಾಶಿಗಳು ದಿವದಿ
ಮಾತಾಡಿದವು ಅಶರೀರ ವಾಕ್ಯಗಳು ಪುರಜನರು
ಕೇಡು ಕೌರವ ರಾಯಗೆಂದು ನಿಶ್ಚಯಿಸಿ
ಓಡಿ ಮನೆಗಳ ಹೊಕ್ಕರು||೨೫||
ಹರುಷ ಪಟ್ಟರು ಮನದಿ ವಿದುರ ಭೀಷ್ಮಾದಿಗಳು
ಸುರರು ನಾರದರಂದು ದ್ರೌಪದಿಯ ಸಿರಿ ಮುಡಿಗೆ
ಸುರಿಸಿದರು ಪೂ ಮಳೆಗಳಾ||೨೬||
ಹರಿಯ ನಾಮಾವಳಿಯ ಪೊಗಳುತಲೆ ದಿವಿಜೇಂದ್ರ
ತಿರುಗಿ ಪೋದನು ತನ್ನ ಪಟ್ಟಣಕೆ ಧರೆ ಮೇಲೆ
ಹರಿನಾಮ ಪೊಗಳುವರೆ ಧನ್ಯರೋ ಲೋಕದಲಿ
ದ್ರೌಪದಿಯ ಹರಿನಾಮವೇ ಕಾಯಿತು||೨೭||
ಯಾರು ಉದಯ ಕಾಲದೊಳೆದ್ದು ಭಾವ ಭಕ್ತಿಯಲಿ
ಭಾವ ಶುದ್ಧ್ಯಿಂದ ಭಜನೆ ಮಾಳ್ಪಂಥವರ
ಸಾವಿರಾರ್ ಜನ್ಮದ ಸಂಚಿಸಿದ ಪಾಪಗಳು
ತಾವೆ ಹತವಾಗೋವೆಂದು||೨೮||
ಶ್ರೀ ವಾಸುದೇವ ಆಜ್ಞಾಪಿಸಿದ ರುಕ್ಮಿಣಿಗೆ
ದೇವಿ ಕೇಳೆನ್ನ ಭಾಷೆಯ ಮುಂದೆ ಅರ್ಜುನಗೆ
ನಾನೇ ಸಾರಥಿಯಾಗಿ ಸಲಹುವೆನು ಅವರೆನ್ನ
ಜೀವ ಪಾಂಡವರೆಂದನು||೨೯||
ಮಂಗಳಮ್ ಮತ್ಸ್ಯ ಕೂರ್ಮ ವರಾಹ ನರಸಿಂಹನಿಗೆ
ಮಂಗಳಮ್ ವಟು ಭಾರ್ಗವ ರಾಮ ಕೃಷ್ಣರಿಗೆ
ಮಂಗಳಮ್ ಪುರಂದರ ವಿಠಲ ರಾಯನಿಗೆ
ಜಯ ಮಂಗಳಮ್ ನಿತ್ಯ ಶುಭ ಮಂಗಳಮ್ ||೩೦||

||ಜಯ ಮಂಗಳಮ್ ನಿತ್ಯ ಶುಭ ಮಂಗಳಮ್ ||

Комментарии

Информация по комментариям в разработке