ಸನ್ಯಾಸಿಗೀತೆ: ಏಳು ಮೇಲೇಳೇಳು | SANYASI GEETE - Vanishree, Vijayalkshmi & Vishwanath: Sharada Gurukula

Описание к видео ಸನ್ಯಾಸಿಗೀತೆ: ಏಳು ಮೇಲೇಳೇಳು | SANYASI GEETE - Vanishree, Vijayalkshmi & Vishwanath: Sharada Gurukula

ಮೂಲ ಆಂಗ್ಲ ರಚನೆ: ಸ್ವಾಮಿ ವಿವೇಕಾನಂದ - SONG OF THE SANNYASIN: Swami Vivekananda
ಕನ್ನಡ ಕಾವ್ಯಾನುವಾದ: ಕುವೆಂಪು
ಹಾಡಿದವರು: ʼಶಾರದಾ ಗುರುಕುಲʼದ (ನಿರ್ದೇಶಕ) ಶ್ರೀ ವಿಶ್ವನಾಥ್‌, ಕು| ವಾಣಿಶ್ರೀ ಮತ್ತು ಕು| ವಿಜಯಲಕ್ಷ್ಮೀ

ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು;
ಹಾಡಿನಿಂದೆಚ್ಚರಿಸು  ಮಲಗಿಹ ನಮ್ಮ ಈ ತಾಯ್ನಾಡನು!
ದೂರದಡವಿಯೊಳೆಲ್ಲಿ ಲೌಕಿಕ ವಿಷಯ ವಾಸನೆ ಮುಟ್ಟದೊ,
ಎಲ್ಲಿ ಗಿರಿ ಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ ,
 ಎಲ್ಲಿ ಕಾಮವು ಸುಳಿಯದೊ - ಮೇಣ್ ಎಲ್ಲಿ ಜೀವವು ತಿಳಿಯದೊ
ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ,
ಎಲ್ಲಿ ಆತ್ಮವು ಪಡೆದು ನಲಿವುದೊ ನಿಚ್ಚವಾಗಿಹ ಶಾಂತಿಯ,
ನನ್ನಿವರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೊ,
ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ
ಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ | ಓಂ! ತತ್! ಸತ್! ಓಂ!

ಬೆಳೆಯ ಕೊಯ್ವನು  ಬಿತ್ತಿದಾತನು; ಪಾಪ ಪಾಪಕೆ ಕಾರಣ;
ವೃಕ್ಷಕಾರ್ಯಕೆ  ಬೀಜಕಾರಣ; ಪುಣ್ಯ, ಪುಣ್ಯಕೆ ಕಾರಣ;
ಹುಟ್ಟಿ  ಮೈವಡೆದಾತ್ಮ ಬಾಳಿನ ಬಲೆಯ ತಪ್ಪದೆ ಹೊರುವುದು;
ಕಟ್ಟು  ಮೀರಿಹನಾವನಿರುವನು? ಕಟ್ಟು  ಕಟ್ಟನೆ ಹೆರುವುದು!"
ಎಂದು ಪಂಡಿತರೆಂಬರು-ಮೇಣ್ ತತ್ವದರ್ಶಿಗಳೆಂಬರು!
ಆದೊಡೇನಂತಾತ್ಮವೆಂಬುದು ನಾಮರೂಪತೀತವು;
ಮುಕ್ತಿಬಂಧಗಳಿಲ್ಲದಾತ್ಮವು ಸರ್ವನಿಯಮಾತೀತವು!
ತತ್ವಮಸಿಯೆಂದರಿತು, ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ಸಾರು ಸಿದ್ಧನೆ, ವಿಶ್ವವರಿಯಲಿ! ಹಾಡು ಸಂನ್ಯಾಸಿ | ಓಂ! ತತ್! ಸತ್! ಓಂ!

'ಶಾಂತಿ ಸರ್ವರಿಗಿರಲಿ' ಉಲಿಯೈ, 'ಜೀವಜಂತುಗಳಾಳಿಗೆ 
ಹಿಂಸೆಯಾಗದೆ ಇರಲಿ ಎನ್ನಿಂದೆಲ್ಲ ಸೊಗದಲಿ ಬಾಳುಗೆ!
ಬಾನೊಳಾಡುವ ನೆಲದೊಳೋಡುವ ಸರ್ವರಾತ್ಮನು ನಾನಹೆ;
ನಾಕನರಕಗಳಾಸೆಭಯಗಳನೆಲ್ಲ ಮನದಿಂದ ದೂಡುವೆ!'
ದೇಹ ಬಾಳಲಿ, ಬೀಳಲಿ;-ಅದು ಕರ್ಮನದಿಯಲಿ ತೇಲಲಿ!
ಕೆಲರು ಹಾರಗಳಿಂದ ಸಿಂಗರಿಸದನು ಪೂಜಿಸಿ ಬಾಗಲಿ!
ಕೆಲರು ಕಾಲಿಂದೊದೆದು ನೂಕಲಿ! ಹುಡಿಯು ಹುಡಿಯೊಳೆ ಹೋಗಲಿ!
ಎಲ್ಲ ಒಂದಿರಲಾರು ಹೊಗಳುವರಾರು ಹೊಗಳಿಸಿಕೊಂಬರು?
ನಿಂದೆ ನಿಂದಿಪರೆಲ್ಲ ಕೂಡಲು ಯಾರು ನಿಂದೆಯನುಂಬರು?
ಪಾಶಗಳ ಕಡಿ! ಬಿಸುಡು, ಕಿತ್ತಡಿ! ಹಾಡು ಸಂನ್ಯಾಸಿ- ಓಂ! ತತ್! ಸತ್! ಓಂ!

ಎಲ್ಲಿ ಕಾಮಿನಿಯೆಲ್ಲಿ ಕಾಂಚನದಾಸೆ ನೆಲೆಯಾಗಿರುವುದೊ,
ಸತ್ಯವೆಂಬುವುದಲ್ಲಿ ಸುಳಿಯದು! ಎಲ್ಲಿ ಕಾಮವು ಇರುವುದೊ,
ಅಲ್ಲಿ ಮುಕ್ತಿಯು ನಾಚಿ ತೋರದು ಎಲ್ಲಿ ಸುಳಿವುದೊ ಭೋಗವು
ಅಲ್ಲಿ ತೆರೆಯದು ಮಾಯೆ ಬಾಗಿಲಿನಲ್ಲಿಹುದು ಭವರೋಗವು;
ಎಲ್ಲಿ ನೆಲೆಸದೋ ಚಾಗವೊ,-ದಿಟವಲ್ಲಿ ಸೇರದೊ ಯೋಗವು! 
ಗಗನವೇ ಮನೆ! ಹಸುರೇ ಹಾಸಿಗೆ! ಮನೆಯು ಸಾಲ್ವುದೆ ಚಾಗಿಗೆ?
ಹಸಿಯೋ, ಬಸಿಯೋ? ಬಿದಿಯು ಕೊಟ್ಟಾಹಾರವನ್ನವು ಯೋಗಿಗೆ!
ಏನು ತಿಂದರೆ, ಏನು ಕುಡಿದರೆ, ಏನು? ಆತ್ಮಗೆ ಕೊರತೆಯೆ?
ಸರ್ವಪಾಪವ ತಿಂದುತೇಗುವ ಗಂಗೆಗೇಂ ಕೊಳೆ ಕೊರತೆಯೆ? 
ನೀನು ಮಿಂಚೈ! ನೀನು ಸಿಡಿಲೈ! ಮೊಳಗು ಸನ್ಯಾಸಿ- ಓಂ! ತತ್! ಸತ್! ಓಂ!

ನಿಜವನರಿತವರೆಲ್ಲೊ ಕೆಲವರು; ನಗುವರುಳಿದವರೆಲ್ಲರೂ
ನಿನ್ನ ಕಂಡರೆ, ಹೇ ಮಹಾತ್ಮನೆ! ಕುರುಡರೇನನು ಬಲ್ಲರು?
ಗಣಿಸದವರನು ಹೋಗು, ಮುಕ್ತನೆ, ನೀನು ಊರಿಂದೂರಿಗೆ
ಸೊಗವ ಬಯಸದೆ, ಅಳಲಿಗಳುಕದೆ! ಕತ್ತಲಲಿ ಸಂಚಾರಿಗೆ
ನಿನ್ನ ಬೆಳಕನು ನೀಡೆಲೈ;- ಸಂಸಾರ ಮಾಯೆಯ ದೂಡೆಲೈ!
ಇಂತು ದಿನದಿನ ಕರ್ಮಶಕ್ತಿಯು ಮುಗಿವವರೆಗೂ ಸಾಗೆಲೈ!
ನಾನು ನೀನುಗಳಳಿದು ಆತ್ಮದೊಳಿಳಿದು ಕಡೆಯೊಳು ಹೋಗೆಲೈ!
ಏಳು ಮೇಲೇಳೇಳು, ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ತತ್ವಮಸಿ ಎಂದರಿತು ಹಾಡೈ, ಧೀರ ಸನ್ಯಾಸಿ- ಓಂ! ತತ್! ಸತ್! ಓಂ!

Комментарии

Информация по комментариям в разработке